ಕಾಫ್‍ಮನ್, ಜಾರ್ಜ್ ಸೈಮನ್

 1889-1961. ಅಮೆರಿಕದ ನಾಟಕಕಾರ. ಪಿಟ್ಸ್‍ಬರ್ಗ್‍ನಲ್ಲಿ ಹುಟ್ಟಿದ ಈತ ಶಾಲಾ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿದ. ನ್ಯಾಯಶಾಸ್ತ್ರವನ್ನು ಓದಿದನಾದರೊ ವಕೀಲಿವೃತ್ತಿಯನ್ನು ತ್ಯಜಿಸಿ ಕೆಲ ಕಾಲ ಮೋಜಣಿದಾರನಾಗಿದ್ದು ಅನಂತರ ವಾಣಿಜ್ಯ ಸಂಚಾರಿಯಾಗಿದ್ದ, 1908ರಲ್ಲಿ ಬರೆವಣೆಗೆಯನ್ನು ಪ್ರಾರಂಭಿಸಿ ಕೆಲಕಾಲ ನ್ಯೂಯಾರ್ಕಿನ ಈವಿನಿಂಗ್ ಮೇಲ್ ಮತ್ತು ಹೆರಾಲ್ಡ್ ಟ್ರಿಬ್ಯೂನ್ ಪತ್ರಿಕೆಗಳಿಗೆ ಬರೆದ. ದಿ ಬಟರ್ ಅಂಡ್ ಎಗ್‍ಮ್ಯಾನ್ (1925) ಬಿಟ್ಟರೆ ಈತ ಬರೆದ ಬಹುತೇಕ ನಾಟಕಗಳು ಮತ್ತೊಬ್ಬರೊಂದಿಗೆ ಕೂಡಿ ಬರೆದವು. ಮಾರ್ಕ್ ಕಾನೆಲ್ಲಿಯ ಜೊತೆಗೂಡಿ ಟು ದಿ ಲೇಡಿಸ್ (1922), ಮೆರ್ಟನ್ ಆಫ್ ದಿ ಮೂವಿಸ್ (1922), ಬೆಗ್ಗರ್ ಆನ್ ಹಾರ್ಸ್‍ಬ್ಯಾಕ್ (1925) ನಾಟಕಗಳನ್ನೂ ಅಲೆಕ್ಸಾಂಡರ್ ವೂಲ್‍ಕಾಟನ ಜೊತೆಗೂಡಿ ದಿ ಚಾನಲ್ ರೋಡ್(1929), ದಿ ಡಾರ್ಕ ಟವರ್ (1933), ನಾಟಕಗಳನ್ನೂ ಮಾಸ್‍ಹಾರ್ಟ ಜೊತೆಗೂಡಿ ಯು ಕಾಂಟ್ ಟೇಕ್ ಇಟ್ ವಿತ್ ಯು ನಾಟಕವನ್ನೂ ರಚಿಸಿದ. ಈ ನಾಟಕ ಪುಲಿಟ್ಜರ್ ಪದಕವನ್ನು ಪಡೆಯಿತು.    

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 